ನಾಭಾದಾಸ
ಸು. 1657-1700  ಭಕ್ತಮಾಲಾ ಕೃತಿಯನ್ನು ಬರೆದ ಕವಿ. ಹಿಂದಿಯಲ್ಲಿ ಮೊದಲ ಬಾರಿಗೆ ಇನ್ನೂರು ಜನ ಭಗವದ್ಭಕ್ತರ ಬದುಕನ್ನು ಕಾವ್ಯಮಯವಾಗಿ ನಿರೂಪಿಸಿದ ಜೀವನಚರಿತ್ರಕಾರ.

	ಬೇರೆಯವರ ಬದುಕನ್ನು ಬರವಣಿಗೆಗೆ ಇಳಿಸಿದ ಈ ಕವಿ ತನ್ನ ಬದುಕನ್ನು ಕುರಿತು ಏನನ್ನು ಬರೆದುಕೊಳ್ಳಲಿಲ್ಲ. ಹೀಗಾಗಿ ಈತನ ಬಗ್ಗೆ ಅಂತರಿಕ ಮೂಲಗಳಿಂದ ಅಲ್ಪಸಲ್ಪ ವಿಷಯಗಳನ್ನು ವಿದ್ವಂಸರು ಹೊರಗೆಡಹಿದ್ದಾರೆ. ಈತನ ಕಾಲ ಬಹುಶಃ 1657 ರಿಂದ 1700. ತುಲಸೀದಾಸನ ಮರಣನಂತರವೂ ಈತ ಬಹಳ ವರ್ಷಗಳ ವರೆಗೆ ಜೀವಿಸಿದ್ದ ಎಂದು ವಿದ್ವಾಂಸರ ಅಭಿಪ್ರಾಯ.

	ಈತ ಹುಟ್ಟಿದ್ದು ಗೋದಾವರಿ ನದಿ ಸಮೀಪದ ರಾಮಭದ್ರಾಚಲದಲ್ಲಿ. ತಂದೆ ಹೆಸರು ರಾಮದಾಸ. ರಾಮನ ಪರಮಭಕ್ತ. ವಿದ್ವಾಂಸ ಸಂಗೀತದಲ್ಲಿ ಪಾರಂಗತ.

	ಒಂದು ದೃಷ್ಟಿಯಲ್ಲಿ ನಾಭಾದಾಸ ಅನಾಥನಾಗಿಯೆ ಬೆಳೆದ. ಈತ ಹುಟ್ಟಿದ ಐದು ವರ್ಷಕ್ಕೆ ತಂದೆ ತೀರಿಕೊಂಡ. ಆಗ ಒದಗಿದ ಭಯಂಕರ ಕ್ಷಾಮದಿಂದಾಗಿ ತಾಯಿಯಿಂದ ಮಗುವನ್ನು ಸಾಕಲಾಗಲಿಲ್ಲ. ಮಗುವನ್ನು ಆಕೆ ಕಾಡಿನಲ್ಲಿ ಬಿಟ್ಟು ಹೊರಟುಹೋದಳು. ಅಗ್ರದಾಸ ಎಂಬಾತ ಮಗುವನ್ನು ಜಯಪುರದ ಬಳಿಯ ಗಲತ ಎಂಬಲ್ಲಿಗೆ ಒಯ್ದು ಮಗನೋಪಾದಿಯಲ್ಲಿ ಘೋಷಿಸಿದ.

	ನಾಭದಾಸನ ಜಾತಿ ಯಾವುದೆಂದು ತಿಳಿಯದು. ಡೋಮ ಜಾತಿಯವ ಕ್ಷತ್ರೀಯ ಬ್ರಾಹ್ಮಣ ಎಂಬ ಅನೇಕ ವಾದಗಳಿವೆ. ಭಕ್ತಮಾಲ ಕೃತಿಯ ಮೊದಲ ಭಾಷ್ಯಕಾರನಾದ ಪ್ರಿಯದಾಸನ ಅಭಿಪ್ರಾಯದಂತೆ ಈತ ಮಹಾರಾಷ್ಟ್ರೀಯ ಬ್ರಾಹ್ಮಣ.

	ನಾಭಾದಾಸನ ಮತ್ತೊಂದು ಹೆಸರು ನಾರಾಯಣದಾಸ ಎಂದು. ಬಹುಶಃ ಅಗ್ರದಾಸರಿಂದ ದೀಕ್ಷೆ ಪಡೆದ ಅನಂತರ ನಾರಾಯಣದಾಸ ನಾಭಾದಾಸನಾಗಿದ್ದಿರಬಹುದು.

	ನಾಭಾದಾಸನ ವ್ಯಕ್ತಿತ್ವವನ್ನು ಅವನ ಕೃತಿಗಳಲ್ಲಿ ಕಾಣಬಹುದು. ನಾಭಾದಾಸ ಮಹಾನ್ ವ್ಯಕ್ತಿತ್ವವುಳ್ಳವ ಗರ್ವಹೀನ, ಪ್ರತಿಭಾಶಾಲಿ, ಸತ್ಯಪ್ರೇಮಿ, ಧರ್ಮಬುದ್ಧಿಯುಳ್ಳವ, ಭಗವಂತನ ಬಗೆಗೆ ಅತೀವ ಭಕ್ತಿ ಹಾಗೂ ವಿಶ್ವಾಸವನ್ನು ಹೊಂದಿದವ, ಸರಳಜೀವಿ, ಉಚ್ಛ-ನೀಚ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿದವ.

	ನಾಭಾದಾಸನ ಪ್ರಸಿದ್ದ ಕೃತಿಯೆಂದರೆ ಭಕ್ತಮಾಲಾ. ಈ ಗ್ರಂಥ ಛಪ್ಪಯಾ ಛಂದಸ್ಸಿನಲ್ಲಿದ್ದು (ಕುಂಡಲಿಯ, ದೋಹ ಛಂದಸ್ಸುಗಳು ಅಲ್ಲಲ್ಲಿ ಬಂದಿವೆ.) ಒಂದೊಂದು ಛಪ್ಪಯ್‍ನಲ್ಲೂ ಒಂದೊಂದು ಭಕ್ತನ ಗುಣಗಾನವಿದೆ. ಕೆಲವೊಮ್ಮೆ ನಾಲ್ಕಾರು ಛಪ್ಪಯ್‍ಗಳ ವರೆಗೂ ಜೀವನ ನಿರೂಪಣೆ ಹರಿದಿರುವುದುಂಟು. ಇದನ್ನಲ್ಲದೆ ಅಷ್ಟಯಾಮಾ ಎಂಬ ಗ್ರಂಥವನ್ನು, ರಾಮನ ಚರಿತ್ರೆಯನ್ನು ಕುರಿತಂತೆ ಕೆಲವು ಪದ್ಯಗಳನ್ನು ಈತ ಬರೆದಿದ್ದಾನೆಂದು ಹೇಳಲಾಗಿದೆ.

	ವಜ್ರಭಾಷೆಯಲ್ಲಿರುವ ಭಕ್ತಮಾಲಾ ಕೃತಿಯಲ್ಲಿ ಭಾಷೆ ತನ್ನೆಲ್ಲಾ ಸೌಂದರ್ಯದೊಂದಿಗೆ ಅಭಿವ್ಯಕ್ತಗೊಂಡಿದೆ. ಭಾಷೆ ಸಂಸ್ಕøತ ನಿಷ್ಠವಾಗಿದ್ದು ಅಲಂಕರಮಾಯವಾಗಿದೆ.

	ಈ ಕೃತಿ ಹಿಂದಿಯಲ್ಲಿ ಎಷ್ಟು ಮಹತ್ವದ್ದು ಎಂದರೆ ಇದಕ್ಕೆ ಅನೇಕ ವ್ಯಾಖ್ಯಾನಗಳು ಹುಟ್ಟಿಕೊಂಡಿರುವುದು ಮಾತ್ರವಲ್ಲ ಇದನ್ನು ಅನುಸರಿಸಿ ಸುಮಾರು 200 ಭಕ್ತಮಾಲಗಳು ವಿವಿಧ ಕವಿಗಳಿಂದ ರಚಿತವಾಗಿವೆ.	
			(ಟಿ.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ